ವೇಬರ್, ಮ್ಯಾಕ್ಸ್
	1864-1920. ಜರ್ಮನಿಯ ಸುಪ್ರಸಿದ್ಧ ಚಿಂತಕ, ಮಹಾ ಮೇಧಾವಿ ವಿದ್ವಾಂಸ, ಸಮಾಜಶಾಸ್ತ್ರದ ಸಂಸ್ಥಾಪಕರಲ್ಲೊಬ್ಬ. ಅಧ್ಯಯನ, ಸಂಶೋಧನೆ, ರಾಜಕಾರಣ, ಬರೆವಣಿಗೆ, ಕಲೆ, ಇತಿಹಾಸ, ಕಾನೂನು ಮುಂತಾದ ಹಲವು ಕ್ಷೇತ್ರಗಳಲ್ಲಿ ಈತನ ಆಸಕ್ತಿ ವ್ಯಾಪಿಸಿಕೊಂ ಡಿತ್ತು. ಸೈನಿಕ ಸೇವೆ ಹಾಗೂ ಶಿಕ್ಷಣದಿಂದ ಹಿಡಿದು ಸಕ್ರಿಯ ರಾಜಕಾರಣದವರೆಗೆ ಈತನ ಸಾರ್ವಜನಿಕ ಚಟುವಟಿಕೆಗಳು ಸಾಗಿದ್ದುವು. ಈತ 1864 ಏಪ್ರಿಲ್ 21ರಂದು ಜರ್ಮನಿಯ ಅರ್‍ಫರ್ಟ್‍ನಲ್ಲಿ ಜನಿಸಿದ. ಇವನ ಮನೆ ಬುದ್ಧಿಜೀವಿಗಳ ಚರ್ಚೆಯ ತಾಣವಾಗಿತ್ತು. ಈತನಿಗೆ ಜಾರ್ಜ್ ಸಿಮ್ಮೆಲ್, ರಾಬರ್ಟ್ ಮೈಕೇಲ್ಸ್, ಸೋಂಬಾರ್ಟ್, ಜಾರ್ಜ್ ಲುಕಾಸ್, ಕಾರ್ಲ್‍ಜಾಸ್ಫರ್ಸ್ ಮುಂತಾದ ಸಮಾಜವಿಜ್ಞಾನಿಗಳು ಮತ್ತು ತತ್ತ್ವಜ್ಞಾನಿಗಳ ನಿರಂತರ ಸಂಪರ್ಕವಿತ್ತು. ಈತ ತನ್ನ 18ನೆಯ ವಯಸ್ಸಿ ನಲ್ಲಿ ಜರ್ಮನಿಯ ಹೈಡಲ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ಕಾನೂನು ವಿದ್ಯಾರ್ಥಿಯಾಗಿ ಸೇರಿದ. ಜೊತೆಗೆ ಕಾನೂನು, ಶಾಸನಗಳು, ಇತಿಹಾಸ, ಅರ್ಥಶಾಸ್ತ್ರ, ದೇವಶಾಸ್ತ್ರ, ತತ್ತ್ವಶಾಸ್ತ್ರ, ಮಧ್ಯಯುಗದ ಇತಿಹಾಸಗಳ ಬಗ್ಗೆ ಅಧ್ಯಯನ ಮಾಡಿದ. ಒಬ್ಬ ಸೈನಿಕನಾಗಿ, ಅಧ್ಯಾಪಕನಾಗಿ, ರಾಜಕಾರಣಿಯಾಗಿ ವಿಭಿನ್ನ ಬಗೆಯ ವೃತ್ತಿ ಜೀವನ ನಡೆಸಿದ. ಹಿಸ್ಟರಿ ಆಫ್ ಕಮರ್ಷಿಯಲ್ ಸೊಸೈಟೀಸ್ ಇನ್ ಮಿಡ್ಲ್ ಏಜ್ ಎಂಬ ಮಹಾಪ್ರಬಂಧಕ್ಕೆ ಈತ ಪಿಎಚ್.ಡಿ. ಪದವಿ ಪಡೆದು ಬರ್ಲಿನ್ ವಿಶ್ವವಿದ್ಯಾಲಯದಲ್ಲಿ 8 ವರ್ಷಗಳ ಕಾಲ ಬೋಧಕನಾಗಿ ಸೇವೆ ಸಲ್ಲಿಸಿದ. ಈ ಅವಧಿಯಲ್ಲಿ ತಂದೆಯೊಡನೆ ಜಗಳವಾಡಿ ಒಂದು ಬಗೆಯ ಮಾನಸಿಕ ಆಘಾತಕ್ಕೆ ಒಳಗಾಗಿ 5 ವರ್ಷಗಳ ತನಕ ಮಂಕು ಹಿಡಿದವನಂತೆ ಕಾಲ ಕಳೆದ.

	ಸಮಾಜಶಾಸ್ತ್ರ ಕ್ಷೇತ್ರಕ್ಕೆ ಈತ ನೀಡಿದ ಕೊಡುಗೆ ಅಪಾರವಾದುದು. 1910ರಲ್ಲಿ ದಿ ಜರ್ಮನ್ ಸೋಷಿಯಾಲಜಿಕಲ್ ಸೊಸೈಟಿ ಎಂಬ ಸಂಘಟನೆಯನ್ನು ಸ್ಥಾಪಿಸಿ ಜರ್ಮನ್ ಸಮಾಜಶಾಸ್ತ್ರದ ಬೆಳೆವಣಿಗೆ ಗೊಂದು ಸಾಂಸ್ಥಿಕ ರೂಪ ಕೊಟ್ಟ. ಈತನ ಜೀವನ ವಿಜ್ಞಾನ ಮತ್ತು ರಾಜಕಾರಣದಲ್ಲಿ ಹಂಚಿಹೋಗಿತ್ತು. ಕೆಲಸ ಕಾರ್ಯಗಳ ಬಗ್ಗೆ ಈತನಿಗಿದ್ದ ಅತೀವವಾದ ಶ್ರದ್ಧೆ ಹಾಗೂ ಕಾಳಜಿಗಳು ಈತನಿಗೆ 1893ರಲ್ಲಿ ¥sóÉರಿಬರ್ಗ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕ ಹುದ್ದೆಯನ್ನು ತಂದು ಕೊಟ್ಟವು. ಸ್ವಲ್ಪ ಸಮಯದಲ್ಲಿಯೇ ಈತ ಇದನ್ನು ಬಿಟ್ಟು ಹೈಡಲ್‍ಬರ್ಗ್ ವಿಶ್ವವಿದ್ಯಾಲಯ ಸೇರಿಕೊಂಡ. ಕೆಲಕಾಲ ಈತ ಸ್ವಿಟ್ಜರ್‍ಲೆಂಡ್ ಮತ್ತು ಇಟಲಿ ದೇಶಗಳಲ್ಲಿ ಪ್ರವಾಸಕೈಗೊಂಡ. ಈ ಅವಧಿಯಲ್ಲಿ (1904-05) ಈತ ಬರೆದ ದಿ ಪ್ರಾಟೆಸ್ಟಂಟ್ ಎಥಿಕ್ ಅಂಡ್ ದಿ ಸ್ಪಿರಿಟ್ ಆಫ್ ಕ್ಯಾಪಿಟಲಿಸಂ ಪ್ರಕಟವಾಯಿತು.

	1904ರ ಅನಂತರವೂ ಈತನ ಮಾನಸಿಕ ಸಮಸ್ಯೆ ಮುಂದುವರಿದಿತ್ತಾ ದರೂ ಈತ ತನ್ನ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಬಂದ. ಪ್ರಪಂಚದ ಬೇರೆ ಬೇರೆ ಧರ್ಮಗಳನ್ನು (ಹಿಂದು, ಬೌದ್ಧ, ಕ್ರೈಸ್ತ ಇತ್ಯಾದಿ) ಪ್ರಪಂಚದ ಐತಿಹಾಸಿಕ ಹಿನ್ನೆಲೆಯಲ್ಲಿ ಅಧ್ಯಯನವನ್ನು ಮಾಡುವ ಈತನ ಪ್ರಯತ್ನ ಈ ಹಂತದಲ್ಲಿಯೇ ನಡೆಯಿತು. ಮ್ಯಾಕ್ಸ್ ವೇಬರ್ ಆನ್ ದಿ ಮೆಥಡಾಲಜಿ ಆಫ್ ಸೋಶಿಯಲ್ ಸೈನ್ಸಸ್ ಎಂಬ ಕೃತಿ ಪ್ರಕಟವಾಯಿತು. ಅನಂತರ ಸೋಶಿಯಲ್ ಸೈಕಾಲಜಿ ಆಫ್ ಫ್ಯಾಕ್ಟರಿ ವರ್ಕರ್ಸ್(1908-09) ಎಂಬ ಕೃತಿ ಪ್ರಕಟವಾಯಿತು.

	ಈತ ತನ್ನ ಜೀವನದ ಕೊನೆಯ ಮೂರು ವರ್ಷಗಳನ್ನು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಆರಂಭದಲ್ಲಿ ಈತ ರಾಜಭಕ್ತಿಯ ಮಾರ್ಗವನ್ನನುಸರಿಸುತ್ತಿದ್ದು ಅನಂತರ ಪ್ರಜಾಪ್ರಭುತ್ವವಾದಿ ತತ್ತ್ವಗಳಲ್ಲಿ ನಿಷ್ಠೆಯನ್ನು ಬೆಳೆಸಿಕೊಂಡ. ಅಂದಿನ ರಾಜಕೀಯ ಪಕ್ಷಗಳು ಕಾರ್ಯನಿರ್ವ ಹಿಸುತ್ತಿದ್ದ ರೀತಿಯನ್ನು ಉಗ್ರವಾಗಿ ಟೀಕಿಸುತ್ತಿದ್ದ.

	ಅಸಮರ್ಥ ನಾಯಕತ್ವ ಕೊನೆಗೊಂಡು ಉತ್ತಮ ನಾಯಕತ್ವ ಪ್ರಾಪ್ತವಾಗಬೇಕೆಂಬುದು ಈತನ ಆಶಯವಾಗಿತ್ತು. ರಾಜಕಾರಣ ಈತನ ಆಸಕ್ತಿಯ ವಿಷಯವಾಗಿದ್ದರೂ ತತ್ತ್ವಭ್ರಷ್ಟ ರಾಜಕಾರಣವನ್ನು ನಿರಾಕರಿಸಿದ. ಅನ್ಯಾಯ, ಅಪ್ರಾಣಿಕತೆ ಹಾಗೂ ಭ್ರಷ್ಟತನಗಳು ಎಲ್ಲೇ ಕಂಡುಬರಲಿ ಅವುಗಳನ್ನು ಖಂಡಿಸುತ್ತಿದ್ದ. ಬೋಧಕ ವೃತ್ತಿಯಿಂದ ಕೆಲಕಾಲ ದೂರವಿದ್ದ (1900-18). ಜೀವಿತದ ಕೊನೆಯ ಮೂರು ವರ್ಷ ಈತ ವಿಯನ್ನ ಮತ್ತು ಮ್ಯೂನಿಚ್ ವಿಶ್ವವಿದ್ಯಾಲಯಗಳಲ್ಲಿ ಸೇವೆಸಲ್ಲಿಸಿದ (1918-20). ಈ ಅವಧಿಯಲ್ಲಿ ಈತನ ದಿ ಎಕನಾಮಿಕ್ ಎಥಿಕ್ಸ್ ಆ¥sóï ವಲ್ರ್ಡ್ ರಿಲಿಜನ್ಸ್ ಎಂಬ ಪ್ರಖ್ಯಾತ ಕೃತಿ ಬೆಳಕು ಕಂಡಿತು. 1920ರಲ್ಲಿ ದಿ ಥಿಯರಿ ಆ¥sóï ಸೋಶಿಯಲ್ ಅಂಡ್ ಎಕನಾಮಿಕ್ ಆರ್ಗನೈಸೇಶನ್ ಎಂಬ ಮಹತ್ತ್ವದ ಕೃತಿಯನ್ನು ರಚಿಸುತ್ತಿದ್ದ ಸಂದರ್ಭದಲ್ಲಿಯೇ ಪ್ರಕಟಣೆಗೂ ಮುನ್ನ ನಿಧನಹೊಂದಿದ.

	ಈತ “ಆರ್ಖಿವ್ ಪುಯಿರ್ ಸೋಶಿಯಲ್ ವಿಸ್ಸೆನ್ಶಾ¥sóï್ಟ” ಎಂಬ ಪ್ರಸಿದ್ಧ ಜರ್ಮನ್ ಸಮಾಜವಿಜ್ಞಾನ ನಿಯತಕಾಲಿಕೆಯ ಸಂಪಾದಕನಾಗಿದ್ದ. ಆ ಕಾಲದ ಅನೇಕ ಪ್ರಸಿದ್ಧ ಸಮಾಜಶಾಸ್ತ್ರಜ್ಞರ, ತತ್ತ್ವಜ್ಞಾನಿಗಳ, ಮನೋವಿಜ್ಞಾನಿಗಳ, ಚಿಂತಕರ ಒಡನಾಟ ಇವನಿಗೆ ಲಭ್ಯವಾಗಿದ್ದವು. ಸಮಾಜಶಾಸ್ತ್ರದ ಅಧ್ಯಯನದ ಬೆಳೆವಣಿಗೆಯಲ್ಲಿ ಈತ ಮೂಡಿಸಿದ ವಸ್ತುನಿಷ್ಠತೆ ಹಾಗೂ ವಿಶ್ಲೇಷಕತೆಯ ಪರಿಕಲ್ಪನೆಗಳು ಇಂದಿಗೂ ಬಹಳ ಪ್ರಭಾವಕಾರಿಯಾಗಿವೆ.

	ಆಧುನಿಕ ಸಮಾಜಶಾಸ್ತ್ರದ ಬೆಳೆವಣಿಗೆಗೆ ಈತ ನೀಡಿದ ಕೊಡುಗೆಗಳಿಗಾಗಿ ಇವನನ್ನು ಆಧುನಿಕ ಸಮಾಜಶಾಸ್ತ್ರದ ಸಂಸ್ಥಾಪಕನೆಂದು ಕರೆಯುವು ದುಂಟು.

	ಜನರಲ್ ಎಕನಾಮಿಕ್ ಹಿಸ್ಟರಿ(1927) ಇವನ ಪ್ರಮುಖ ಕೃತಿ. ಇವನ ಮರಣಾನಂತರ ಇವನ ಪತ್ನಿ ಈತನ ಕೆಲವು ಕೃತಿಗಳನ್ನು ಪ್ರಕಟಿಸಿದಳು. ಇವುಗಳಲ್ಲಿ ಹಿಂದುಯಿಸಮ್ಸ್ ಅಂಡ್ ಬುದ್ಧಿಸಮ್ಸ್, ದಿ ರಿಲಿಜನ್ ಆಫ್ ಚೀನ, ಕನ್‍ಫ್ಯೂಶಿಯನಿಸಮ್ ಅಂಡ್ ಟಾವೋ ಇಸಮ್(1951), ದಿ ರಿಲಿಜನ್ ಆಫ್ ಇಂಡಿಯ: ದಿ ಸೋಷಿಯಾಲಜಿ ಆಫ್ ಹಿಂದುಯಿಸಮ್ ಅಂಡ್ ಬುದ್ಧಿಸಮ್(1958), ಏನ್ಷಂಟ್ ಜುಡಾಯಿಸಮ್(1952), ದಿ ಥಿಯರಿ ಆಫ್ ಸೋಷಿಯಲ್ ಅಂಡ್ ಎಕನಾಮಿಕ್ ಆರ್ಗನೈಸೇಷನ್(1947) ಮುಖ್ಯವಾದುವು. ಈತ 1920 ಜೂನ್ 14ರಂದು ನಿಧನಹೊಂದಿದ.	
(ಎಚ್.ಎಮ್.ಎಮ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ